ಸೆಲಿನಿಯಮ್
	ಆವರ್ತಕೋಷ್ಟಕದ 6ಎ ಗುಂಪಿನ 4ನೆಯ ಆವರ್ತದ ಅಲೋಹೀಯ ಧಾತು.  ಪ್ರತೀಕ Se. ಶಿಷ್ಟಸ್ಥಿತಿ: 250 ಸೆ. ತಾಪದಲ್ಲಿ ಲೋಹೀಯ ಕಾಂತಿಯುಳ್ಳ ಬೂದು ಬಣ್ಣದ ಘನ. ಪರಮಾಣು ಸಂಖ್ಯೆ 34. ಪರಮಾಣು ತೂಕ 78.96. ದ್ರವನಬಿಂದು 2170 ಸೆ. ಕುದಿಬಿಂದು 6850 ಸೆ. ಸಾಪೇಕ್ಷ ಸಾಂದ್ರತೆ 4.810. ಎಲೆಕ್ಟ್ರಾನ್ ವಿನ್ಯಾಸ 1s2 2s2 2p6 3s2 3p6 3d10 4s2 4p4. ಉತ್ಕರ್ಷಣ ಸ್ಥಿತಿಗಳು -2, +4, +6. 9 ಸಮಸ್ಥಾನಿಗಳ ಪೈಕಿ 5 ಸ್ಥಿರ. ಟೆಲ್ಯೂರಿಯಮ್ ಸಾಹಚರ್ಯದಲ್ಲಿ ಮೊದಲು ದೊರೆತದ್ದರಿಂದ ಈ ಹೆಸರು (ಸೆಲೀನಿ: ಚಂದ್ರ, ಟೆಲಸ್: ಭೂಮಿ). ಸ್ವೀಡಿಷ್ ರಸಾಯನ ವಿಜ್ಞಾನಿ ಬ್ಯಾರನ್ ಜೋನ್ಸ್ ಜೇಕಬ್ ಬರ್ಝೀಲಿಯಸ್‍ನಿಂದ (1779-1848), ಗಂಧಕಾಮ್ಲದ ಶೇಷವೊಂದರಲ್ಲಿ ಆವಿಷ್ಕಾರ (1817). 

	ಸೆಲೆನೈಡ್ ಖನಿಜಗಳ ರೂಪದಲ್ಲಿ ( ಕ್ಲಾಸ್ತಲೈಟ್ ಅಥವಾ ಸೀಸದ ಸೆಲೆನೈಡ್); ತಾಮ್ರ, ಬೆಳ್ಳಿ ಅಥವಾ ಸೀಸ ಮುಂತಾದವುಗಳ ಸಲ್ಫೈಡ್ ಅದುರುಗಳ ರೂಪದಲ್ಲಿ ನಿಸರ್ಗದಲ್ಲಿ ಲಭ್ಯ. ಈ ಅದುರುಗಳನ್ನು ಸಂಸ್ಕರಿಸುವಾಗ ದೊರೆಯುವ ಉಪಉತ್ಪನ್ನ. ಸಾಮಾನ್ಯವಾಗಿ ತಾಮ್ರ ಸಂಸ್ಕರಣಾಗಾರಗಳಲ್ಲಿ ಉತ್ಪತ್ತಿ ಆಗುವ ಧನವಿದ್ಯುದ್ವಾರ ಕಿಟ್ಟ ಅಥವಾ ಗಂಧಕಾಮ್ಲ ತಯಾರಿಕಾ ಘಟಕಗಳಲ್ಲಿನ ಸೀಸಕೋಷ್ಠಗಳ ಕಿಟ್ಟದಿಂದ ಪ್ರತ್ಯೇಕಿಸಿ ಸೆಲೀನಿಯಮ್ ಧಾತು ಉತ್ಪಾದನೆ.

	ಗಂಧಕವನ್ನು ಹೋಲುವ ಈ ಧಾತುವಿಗೂ ಅನೇಕ ಭಿನ್ನರೂಪಗಳಿವೆ: ಇಟ್ಟಿಗೆ ಕೆಂಪು ಚೂರ್ಣ; ಕಾಚ (ವಿಟ್ರಿಅಸ್) ಸೆಲೀನಿಯಮ್ ಎಂಬ ಕಂದುಗಪ್ಪು ಬಣ್ಣದ ಗಾಜಿನಂಥ ಅಸ್ಫಟಿಕೀಯ ರಾಶಿ; 4.5 ಸಾಪೇಕ್ಷ ಸಾಂದ್ರತೆಯುಳ್ಳ ಕೆಂಪು ಏಕನತೀಯ ಸ್ಫಟಿಕ ಮತ್ತು ಬೂದು ಸೆಲೀನಿಯಮ್ ಎಂಬ ಬೂದು ಬಣ್ಣದ ಕಾಂತಿಯುತ ಅಷ್ಟಭುಜೀಯ ಸ್ಫಟಿಕ. ಸೆಲೀನಿಯಸ್ ಮತ್ತಿ ಸೆಲೀನಿಕ್ ಆಮ್ಲಗಳನ್ನು ರೂಪಿಸುತ್ತದೆ. ಇವುಗಳ ಲವಣಗಳೇ ಸೆಲಿನೈಟ್ ಮತ್ತು ಸೆಲಿನೇಟ್‍ಗಳು. ಧಾತುರೂಪೀ ಸೆಲೀನಿಯಮ್ ವಿಷವಲ್ಲದಿದ್ದರೂ ಹೈಡ್ರೊಜೆನ್ ಸೆಲಿನೈಡ್ ಮತ್ತಿತರ ಸೆಲಿನಿಯಮ್ ಸಂಯಕ್ತಗಳು ತೀವ್ರ ವಿಷಗಳು. 1.5 ಪಿಪಿಎಮ್‍ಗಿಂತ ಅಧಿಕ ಸಾಂದ್ರ ಮಾನವ ಸಹ್ಯವಲ್ಲ. ಸೆಲೀನಿಯಮ್ ಲವಣಗಳಿರುವ ಮಣ್ಣಿನಲ್ಲಿ ಬೆಳೆದ ಸಸ್ಯಗಳನ್ನು ತಿಂದ ಜಾನುವಾರುಗಳ ಮೇಲೆ ತೀವ್ರ ದುಷ್ಪರಿಣಾಮ ಉಂಟುಮಾಡಿದ ನಿದರ್ಶನಗಳುಂಟು. ಬೂದು ಸೆಲೀನಿಯಮ್ ವಿದ್ಯುದ್ವಾಹಕ. ವಿದ್ಯುದ್ವಾಹಕತೆ ಬೆಳಕಿನ ತೀವ್ರತೆಗೆ ನೇರ ಅನುಪಾತೀಯವಾಗಿರುವದು ವೈಶಿಷ್ಟ್ಯ.

	ಮಾನವನಿಗೆ ಅವಶ್ಯವಾದ ಲೇಶಧಾತು. ಸ್ವತಂತ್ರ ರ್ಯಾಡಿಕಲ್ ವರ್ಜನೆಯಲ್ಲಿ, ಇತರ ಉತ್ಕರ್ಷಣ ವಿರೋಧಕ ಕಿಣ್ವಗಳಲ್ಲಿ, ಥೈರಾಯ್ಡ್ ಗ್ರಂಥಿಯ ಕಾರ್ಯನಿರ್ವಹಣೆಯಲ್ಲಿ ಇದು ಪಾಲ್ಗೊಳ್ಳುತ್ತದೆ. ಏಕದಳ ಧಾನ್ಯ, ಮಾಂಸ, ಮೀನು ಮತ್ತು ಮೊಟ್ಟೆಯ ಮೂಲಕ ಪೂರೈಕೆ. ದಿನವೊಂದಕ್ಕೆ 55 ಮೈಕ್ರೊಗ್ರಾಮ್ ಗರಿಷ್ಠ ಗುಟಿ (400 ಮೈಕ್ರೊಗ್ರಾಮ್ ಹಾನಿಕಾರಕ).

	ದ್ಯುತಿವಿದ್ಯುದುಪಕರಣಗಳಲ್ಲಿ ಬಳಕೆ ಉಂಟು. ಗಾಜು ಮತ್ತು ಎನ್ಯಾಮಲ್ ತಯಾರಿಯಲ್ಲಿ ವರ್ಣಕಾರಿಯಾಗಿ ಕೆಂಪು ಸೆಲೀನಿಯಮ್ ಅಥವಾ ಸೋಡಿಯಮ್ ಸೆಲಿನೈಡ್ ಬಳಕೆ.  ಗಾಜು ತಯಾರಿಯಲ್ಲಿ ಕಬ್ಬಿಣದ ಸಂಯುಕ್ತಗಳು ನೀಡುವ ಹಸುರು ಛಾಯೆಯನ್ನು ತಟಸ್ಥಗೊಳಿಸುವ ನಿರ್ವರ್ಣಕಾರಿಯಾಗಿಯೂ ಬಳಕೆ. ಸವೆತ ನಿರೋಧಕ ಗುಣ ವರ್ಧಕವಾಗಿ ವಲ್ಕನೀಕೃತ ರಬ್ಬರ್‍ಗೆ ಸೇರಿಸುವುದುಂಟು. ಕೀಟನಾಶಕವಾಗಿ ಸೋಡಿಯಮ್ ಸೆಲಿನೇಟ್ ಮತ್ತು ಅನೇಕ ಚರ್ಮರೋಗಗಳ ಚಿಕಿತ್ಸೆಯಲ್ಲಿ ಸೆಲೀನಿಯಮ್ ಸಲ್ಫೈಡ್ ಬಳಕೆ ಉಂಟು.									
	(ಎಸ್.ಹೆ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ